ಶಾಲಾ ಮಕ್ಕಳಿಗೆ 'ಮಿಲೆಟ್‌ ಮಿಕ್ಸ್‌' ಭಾಗ್ಯ, ಶೀಘ್ರದಲ್ಲೇ ಯೋಜನೆಗೆ ಚಾಲನೆ, 50 ಲಕ್ಷ ಮಕ್ಕಳಿಗೆ ಪ್ರಯೋಜನ.

 ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯದ ಜತೆಗೆ ಇನ್ನು ಮುಂದೆ 'ಸಾರವರ್ಧಿತ ಮಿಲೆಟ್‌ ಮಿಕ್ಸ್‌' ಕೂಡ ಸಿಗಲಿದೆ. ಆ ಮೂಲಕ ವಿದ್ಯಾರ್ಥಿಗಳ ಪೌಷ್ಟಿಕಾಂಶದ ಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಶಿಕ್ಷಣ ಇಲಾಖೆ ಹೊಂದಿದೆ. ಸದ್ಯ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯದಲ್ಲಿ ವಿವಿಧ ರುಚಿಯ ಪುಡಿಯನ್ನು ಸೇರಿಸಿ ನೀಡುತ್ತಿದೆ. ಇದರ ಜತೆಗೆ ವಿದ್ಯಾರ್ಥಿಗಳಿಗೆ ಸಾರವರ್ಧಿತ ಮಿಲೆಟ್‌ ಮಿಕ್ಸ್‌ ನೀಡುವ ಮೂಲಕ ಕಡಿಮೆ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿನ ಪೌಷ್ಟಿಕಾಂಶವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.

 

ಶಿಕ್ಷಣ ಇಲಾಖೆಯು ಕರ್ನಾಟಕ ಹಾಲು ಮಹಾ ಮಂಡಳದಿಂದ (ಕೆಎಂಎಫ್‌) ಹಾಲಿನ ಪುಡಿ ಖರೀದಿಸಿ ವಿದ್ಯಾರ್ಥಿಗಳಿಗೆ ಹಾಲು ನೀಡುತ್ತಿದೆ. ಹೊಸದಾಗಿ ಜಾರಿಗೆ ತರಲು ನಿರ್ಧರಿಸಿರುವ ಮಿಲೆಟ್‌ ಮಿಕ್ಸ್‌ಗೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ.

ಈಗಾಗಲೇ ಶ್ರೀ ಸತ್ಯ ಸಾಯಿ ಟ್ರಸ್ಟ್‌ ಎಂಬ ಸ್ವಯಂಸೇವಾ ಸಂಸ್ಥೆಯು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಅನ್ನಪೂರ್ಣ ಹೆಲ್ತ್‌ ಮಿಕ್ಸ್‌ ಅನ್ನು ಶಾಲೆಗಳಿಗೆ ಪೂರೈಕೆ ಮಾಡುತ್ತಿದೆ. ಇದನ್ನೇ ರಾಜ್ಯ ಸರಕಾರ ಎಲ್ಲ ಶಾಲೆಗಳಿಗೂ ವಿಸ್ತರಿಸಲು ನಿರ್ಧರಿಸಿದೆ.

ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯು ಪ್ರಯೋಗಾಲಯದ ಮೂಲಕ ಪೌಷ್ಠಿಕಾಂಶದ ಪುಡಿಯನ್ನು ತಪಾಸಣೆಗೆ ಒಳಪಡಿಸಿದೆ. ಅಲ್ಲಿ ಉತ್ತಮ ಫಲಿತಾಂಶ ಬಂದಿರುವುದರಿಂದ ಪುಡಿಯನ್ನು ಹಾಲಿನಲ್ಲಿ ಮಿಶ್ರಣ ಮಾಡಲು ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದೆ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿಅದಮ್ಯ ಚೇತನ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿತ್ತು. ಆದರೆ, ಆಗ ಸಾಧ್ಯವಾಗಿರಲಿಲ್ಲ.

ಶಿಕ್ಷಣ ಇಲಾಖೆಯು ಈ ಪೌಷ್ಠಿಕಾಂಶದ ಮಿಶ್ರಣದ ಹಾಲನ್ನು ವಾರದಲ್ಲಿ ಮೂರು ದಿನ ನೀಡಲಿದೆ. ಈಗಾಗಲೇ ಹೆಲ್ತ್‌ ಮಿಕ್ಸ್‌ ಅನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಮಿಕ್ಸ್‌ನಲ್ಲಿ ಅಸ್ವಾಭಾವಿಕ ಬಣ್ಣ ಅಥವಾ ಸಿಹಿಯನ್ನು ಸೇರಿಸದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಮಕ್ಕಳಿಗೂ ಇದನ್ನು ವಿಸ್ತರಿಸಬಹುದು ಎಂದು ವರದಿ ನೀಡಿರುವುದು ತಿಳಿದು ಬಂದಿದೆ.

ಕ್ಷೀರಭಾಗ್ಯ

ರಾಜ್ಯ ಸರಕಾರ 2013ರಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿತ್ತು. ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಠಿಕತೆ ನಿವಾರಿಸಿ ಮಕ್ಕಳನ್ನು ಆರೋಗ್ಯ ಪೂರ್ಣವಾಗಿಸಲು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು. ವಾರದಲ್ಲಿ ಮೂರು ದಿನ 18 ಗ್ರಾಂ.ನಷ್ಟು ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿ.ಲೀ ಹಾಲನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. 2017ರ ಜುಲೈನಿಂದ ಇದನ್ನು 3 ದಿನದಿಂದ 5 ದಿನಕ್ಕೆ ವಿಸ್ತರಿಸಲಾಯಿತು. ಈ ಯೋಜನೆಗಾಗಿ ಸರಕಾರ ವಾರ್ಷಿಕ ಅಂದಾಜು 258 ಕೋಟಿ ರೂ. ವೆಚ್ಚ ಮಾಡುತ್ತಿದೆ.

ವಿದ್ಯಾರ್ಥಿಗಳಿಗೆ ಹೆಚ್ಚಿನ ಪೌಷ್ಟಿಕಾಂಶ ನೀಡಬೇಕೆಂಬ ಉದ್ದೇಶದಿಂದ ಕ್ಷೀರಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು. ಜತೆಗೆ ವಿದ್ಯಾರ್ಥಿಗಳಿಗೆ ಮಿಲೆಟ್‌ ಮಿಕ್ಸ್‌ ಸೇರಿಸಿ ನೀಡಲು ನಿರ್ಧರಿಸಲಾಗಿದೆ. ಇದು ವಿದ್ಯಾರ್ಥಿಗಳಲ್ಲಿನ ಪೌಷ್ಟಿಕಾಂಶ ಹೆಚ್ಚಿಸಲು ಸಹಾಯವಾಗುತ್ತದೆ. ಶೀಘ್ರದಲ್ಲೇ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್‌. ಮಧು ಬಂಗಾರಪ್ಪ ಹೇಳಿದ್ದಾರೆ.

ಮುಖ್ಯಾಂಶಗಳು

5 ದಿನ 150 ಎಂ.ಎಲ್‌ ಹಾಲು

ವಿವಿಧ ಫ್ಲೇವರ್‌ಗಳಲ್ಲಿಲಭ್ಯ

55 ಲಕ್ಷ ವಿದ್ಯಾರ್ಥಿಗಳು

Post a Comment

Previous Post Next Post