ತಡರಾತ್ರಿ ಪಾರ್ಟಿ ಪ್ರಕರಣ: ವಿಚಾರಣೆಗೆ ಹಾಜರಾದ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್, ಹೇಳಿಕೆ ದಾಖಲು

 ಬೆಳಗಿನ ಜಾವದವರೆಗೂ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ ಸೇರಿ 8 ಮಂದಿ ಪೊಲೀಸರ ಎದುರು ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದು, ಹೇಳಿಕೆ ದಾಖಲಿಸಿದ್ದಾರೆ.

                                                                    ನಟ ದರ್ಶನ್

Posted By : Rekha.M
Source : Online Desk

ಬೆಂಗಳೂರು: ಬೆಳಗಿನ ಜಾವದವರೆಗೂ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ ಸೇರಿ 8 ಮಂದಿ ಪೊಲೀಸರ ಎದುರು ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದು, ಹೇಳಿಕೆ ದಾಖಲಿಸಿದ್ದಾರೆ.

ಅವಧಿ ಮೀರಿ ಪಬ್​ನಲ್ಲಿ ಪಾರ್ಟಿ ಮಾಡಿದ ಆರೋಪದ ಹಿನ್ನೆಲೆ ನಟ ದರ್ಶನ್ ಸೇರಿ ಎಂಟು ಮಂದಿಗೆ ನೀಡಲಾಗಿದ್ದ ನೊಟೀಸ್​ಗೆ ಉತ್ತರಿಸಲು ಸುಬ್ರಮಣ್ಯನಗರ ಠಾಣೆ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

ನಟರಾದ ದರ್ಶನ್, ಡಾಲಿ ಧನಂಜಯ್, ನೀನಾಸಂ ಸತೀಶ್, ಚಿಕ್ಕಣ್ಣ, ಕಾಟೇರ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್ ಅವರು ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು.

ಜನವರಿ 3 ರಂದು ಜೆಟ್​ಲಾಗ್​ನಲ್ಲಿ ಏರ್ಪಡಿಸಲಾಗಿದ್ದ ಪಾರ್ಟಿ ಆರೋಪ ಸಂಬಂಧ ಪೊಲೀಸರು ವಿಚಾರಣೆ ನಡೆಸಿ, ಅವರಿಂದ ಹೇಳಿಕೆ ಪಡೆದುಕೊಂಡರು.

ವಿಚಾರಣೆ ಎದುರಿಸಿದ ಬಳಿಕ ಪ್ರಕರಣ ಪರವಾಗಿ ಮಾತನಾಡಿದ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರು. ಕಾಟೇರ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಜನವರಿ 3ರಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಊಟ ಮಾಡಿಕೊಂಡು ಸ್ಥಳದಿಂದ ನಿರ್ಗಮಿಸಿದ್ದೆವು. ಊಟ ಮಾಡುವುದು ಪೂರ್ವ ನಿರ್ಧರಿತವಾಗಿರಲಿಲ್ಲ. ಊಟ ಮಾಡೋದು ತಡವಾಯಿತು. ಈ ವೇಳೆ ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಟೇರ ಸಿನಿಮಾ ಯಶಸ್ಸು ತಡೆಯಲಾರದೇ ದರ್ಶನ್​ ಅವರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಕಾನೂನು ಎಲ್ಲರಿಗೂ ಒಂದೇ. ನ್ಯಾಯಕ್ಕೆ ತಲೆಬಾಗಲೇಬೇಕು. ಅದರಂತೆ ಪೊಲೀಸ್ ವಿಚಾರಣೆ ಎದುರಿಸಿದ್ದೇವೆ ಎಂದು ಹೇಳಿದರು.


Post a Comment

Previous Post Next Post