ಶಿವಮೊಗ್ಗ ಮೂಲದ ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ದೂರದ ಅಸ್ಸಾಂನಲ್ಲಿ ಧರಣಿ ಕುಳಿತ ಮಹಿಳೆ! ಯಾಕೆ?

 ಶಿವಸಾಗರ್ (ಅಸ್ಸಾಂ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಮಣಿಪುರದಿಂದ ಜ. 14ರಂದು ಆರಂಭವಾಗಿ, ಜ. 18ರಂದು ಅಸ್ಸಾಂಗೆ ಕಾಲಿಟ್ಟಿದೆ. ಅಸ್ಸಾಂನ ಶಿವಸಾಗರ್ ಜಿಲ್ಲೆಯ ಅಮ್ಗುರಿ ಎಂಬಲ್ಲಿ ತಮ್ಮ ಕೆಲವೇ ಬೆಂಬಲಿಗರೊಂದಿಗೆ ಧರಣಿ ನಡೆಸಿದರು.

ಅವರು ಹೆಸರು ಅಂಕಿತಾ ದತ್ತಾ. ಯೂತ್ ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಶಿವಮೊಗ್ಗ ಮೂಲದ ಶ್ರೀನಿವಾಸ್ ಬಿ.ವಿ. ಅವರಿಂದ ತಮಗೆ ಲೈಂಗಿಕ ಕಿರುಕುಳವಾಗಿದೆ ಎಂಬುದು ಅವರ ಆರೋಪ. ಅಮ್ಗುರಿಯಲ್ಲಿ ನ್ಯಾಯಾ ಯಾತ್ರೆಗೆ ಬರುವ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಶ್ರೀನಿವಾಸ್ ವಿರುದ್ಧ ದೂರು ಕೊಡಲು ಹಾಗೂ ತಮ್ಮ ವಿಚಾರದಲ್ಲಿ ನ್ಯಾಯ ಕೇಳಲು ಅವರು ಆಗಮಿಸಿದ್ದರು.

ರಾಹುಲ್ ಗಾಂಧಿಯವರ ನ್ಯಾಯ್ ಯಾತ್ರೆ ಸಾಗುವ ಹಾದಿಯ ಇಕ್ಕೆಲಗಳಲ್ಲಿ ತಾವು ಹಾಗೂ ರಾಹುಲ್ ಗಾಂಧಿಯವರು ಕೆಲವಾರು ಸಮಾರಂಭಗಳಲ್ಲಿ ಒಟ್ಟಿಗೆ ನಿಂತಿರುವ ಫೋಟೋಗಳುಳ್ಳ ಹೋರ್ಡಿಂಗ್ಸ್ ಗಳನ್ನು , ಬ್ಯಾನರ್ ಗಳನ್ನು ಹಾಕಿಸಿದ್ದರು ಅಂಕಿತಾ. ಆ ಪೋಸ್ಟರ್ ಗಳ ಮೇಲೆ “ರಾಹುಲ್ ಅವರೇ ಪ್ರತಿದಿನ ನಿಮ್ಮನ್ನು ಭೇಟಿ ಮಾಡಿ ಅಳಲು ತೋಡಿಕೊಳ್ಳುವ ನಾನಾ ಹೆಣ್ಣುಮಕ್ಕಳನ್ನು ನೋಡಿ ನೋಡಿ ಸಾಕಾಗಿದೆಯೇ, ಅಂಕಿತಾರಿಗೆ ಯಾವಾಗ ನ್ಯಾಯ ಕೊಡಿಸುತ್ತೀರಿ ಎಂಬ ವಾಕ್ಯಗಳುಳ್ಳ ಹೋರ್ಡಿಂಗ್ಸ್ ಗಳನ್ನೂ ಹಾಕಲಾಗಿತ್ತು.

ಆದರೆ, ಇವ್ಯಾವುದೂ ರಾಹುಲ್ ಗಾಂಧಿಯವರನ್ನು ತಟ್ಟಲಿಲ್ಲ. ಇತ್ತ, ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ತಮ್ಮ ಮನವಿ ಪತ್ರವನ್ನು ಸಲ್ಲಿಸಲು ಹಾತೊರೆಯುತ್ತಿದ್ದ ಅಂಕಿತಾರಿಗೂ ರಾಹುಲ್ ಸಿಗಲಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡ ಅವರು, ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು.

“ನಾನು ಶ್ರೀನಿವಾಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಕೂಡಲೇ ನನ್ನನ್ನು ಪಕ್ಷದಿಂದ ಹೊರಹಾಕಲಾಗಿದೆ. ಕಳೆದ 10 ತಿಂಗಳಿಂದ ನಾನು ವನವಾಸ ಅನುಭವಿಸುತ್ತಿದ್ದೇನೆ. ನಾನು ನ್ಯಾಯ ಕೇಳಿದ್ದಕ್ಕೆ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ರಾಹುಲ್ ಅವರಿಗೆ ನಡೆದ ಘಟನೆಯನ್ನು ವಿವರಿಸಬೇಕು ಎಂದಿದ್ದೆ. ಆದರೆ, ಅವರು ಸಿಕ್ಕಲಿಲ್ಲ” ಎಂದು ಹೇಳಿದ್ದಾರೆ.


ಏನಿದು ಘಟನೆ?

ಕಳೆದ ವರ್ಷ, ಅಂಕಿತಾ ಅವರು ಯೂತ್ ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಶಿವಮೊಗ್ಗದ ಭದ್ರಾವತಿ ಮೂಲದ ಶ್ರೀನಿವಾಸ್ ಭದ್ರಾವತಿ ವೆಂಕಟ (ಬಿ.ವಿ. ಶ್ರೀನಿವಾಸ್) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆರು ತಿಂಗಳಿನಿಂದ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಕೆಟ್ಟ ಪದಗಳಿಂದ ಕರೆಯುವುದು, ಲೈಂಗಿಕ ಪ್ರಚೋದನಾಕಾರಿ ಪದಗಳನ್ನು ಬಳಸಿ ಮಾತನಾಡಿಸುವುದು ಇತ್ಯಾದಿ ಮಾಡುತ್ತಿದ್ದಾರೆ. ಇದರ ವಿರುದ್ಧ ಸಿಡಿದೆದ್ದಿದ್ದಕ್ಕೆ ವಿಚಾರವನ್ನು ಯಾರಿಗಾದರೂ ಹೇಳಿದರೆ ಪರಿಸ್ಥಿತಿ ಸರಿಯಿರುವುದಿಲ್ಲ ಎಂದು ಶ್ರೀನಿವಾಸ್ ಅವರು ಬೆದರಿಕೆಯನ್ನೂ ಹಾಕುತ್ತಾರೆ ಪೊಲೀಸರಿಗೆ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು. ಈ ದೂರಿನನ್ವಯ ಶ್ರೀನಿವಾಸ್ ವಿರುದ್ಧ ಎಫ್ಐಆರ್ ಸಹ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ, ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು.

Post a Comment

Previous Post Next Post