ನಡೆಯುತ್ತಿರುವುದೆಲ್ಲಸಂಸತ್‌ ಚುನಾವಣೆಗಾಗಿ; ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ಸಾಲು ಸಾಲು ಸಮಾರಂಭ

 ಶಿವಮೊಗ್ಗ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಜಾತಿ ಸಮಾವೇಶಗಳು ಮತ್ತು ಸರಕಾರದ ಯೋಜನೆಗಳ ಪರಿಣಾಮಕಾರಿ ಜಾರಿ ನೆಪದಲ್ಲಿ ಸಾಲು ಸಾಲು ಸಮಾರಂಭಗಳು ಶುರುವಾಗಿವೆ.


ವಿಧಾನಸಭೆ ಚುನಾವಣೆ ಪೂರ್ವದಲ್ಲಿ ತಾರಕಕ್ಕೇರಿ ಬಳಿಕ ತಣ್ಣಗಾಗಿದ್ದ ಮೀಸಲು, ಒಳ ಮೀಸಲು ವಿಷಯ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೆ ಮುನ್ನೆಲೆಗೆ ಬಂದಿದೆ. ‘ತಮ್ಮ ಜಾತಿಗೆ ಒಳ ಮೀಸಲು ಸೌಲಭ್ಯ ಕಲ್ಪಿಸದೆ ಹೋದಲ್ಲಿ ಮುಂದಿನ ಚುನಾವಣೆಯಲ್ಲಿ ನಮ್ಮ ಸಮಾಜದವರು ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಈ ಸಂಬಂಧವಾಗಿ ಸಮಾಜದವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಮುಖಂಡರು ಹೇಳುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಮೀಸಲು ವಿಷಯ ಎಂದುಕೊಂಡರೂ ಆಂತರ್ಯದಲ್ಲಿ ಚುನಾವಣೆ ಪ್ರಚಾರ ಅಡಗಿದೆ ಎಂಬುದು ಅರ್ಥವಾಗದೆ ಇರದು.

ರಾಜ್ಯ ಮತ್ತು ಕೇಂದ್ರದಲ್ಲಿಎರಡು ಪ್ರತ್ಯೇಕ ಪಕ್ಷಗಳ ಸರಕಾರಗಳು ಅಸ್ತಿತ್ವದಲ್ಲಿಇರುವುದಿಂದ ಬಿಜೆಪಿ ಮೇಲೆ ಕಾಂಗ್ರೆಸ್‌, ಕಾಂಗ್ರೆಸ್‌ ಮೇಲೆ ಬಿಜೆಪಿ ಆಪಾದನೆ ಮಾಡಲು ಅತ್ಯುತ್ತಮ ಅವಕಾಶ ಸಿಕ್ಕಂತಾಗಿದೆ. ‘ತಮ್ಮ ಸರಕಾರ ಸಿದ್ಧವಿದೆ; ಆದರೆ, ಅವರು ಅದಕ್ಕೆ ಆಸ್ಪದ ನೀಡುತ್ತಿಲ್ಲ’ ಎಂದು ಕೇಂದ್ರದವರು ರಾಜ್ಯದ ಮೇಲೆ, ರಾಜ್ಯದವರು ಕೇಂದ್ರದ ಮೇಲೆ ಆಪಾದಿಸುತ್ತಿದ್ದಾರೆ. ನಮಗೆ ವಿರುದ್ಧವಾಗಿರುವ ಈ ಸರಕಾರವನ್ನು ಕಿತ್ತೊಗೆಯಬೇಕು, ನಮಗೆ ಬಹುಮತ ಬಂದಲ್ಲಿನಿಮಗೆ ಒಳಿಗಾಗುತ್ತದೆ ಎಂದು ಹೇಳಿ ಮತದಾರರ ಕರುಣೆ ಸೃಷ್ಟಿಸಿಕೊಳ್ಳುವ ಪ್ರಯತ್ನ ನಡೆದಿದೆ. ಮತ್ತೊಂದು ಕಡೆ ತಮ್ಮ ಬೇಡಿಕೆಯನ್ನು ಈಡೇರಿಸಿದ ಸರಕಾರಕ್ಕೆ ಕೃತಜ್ಞತೆ ಹೇಳುವ ಸಲುವಾಗಿಯೂ ಸಮಾವೇಶಗಳು ಶುರುವಾಗಿವೆ.

ಕಾಂಗ್ರೆಸ್‌ಗೆ ಗ್ಯಾರಂಟಿ ಬಲ

ಬಿಜೆಪಿಯ ಪ್ರಚಾರದ ಮುಂದೆ ಕಾಂಗ್ರೆಸ್‌ನ ಚಟುವಟಿಕೆಗಳು ನಿಸ್ತೇಜವಾಗಿವೆ. ಪಕ್ಷದ ಅಭ್ಯರ್ಥಿ ಅಂತಿಮವಾಗದಿರುವುದು ಇದಕ್ಕೆ ಕಾರಣವಿರಬಹುದು. ಆದರೆ, ಸರಕಾರಿ ಯೋಜನೆಗಳ ಪರಿಣಾಮಕಾರಿ ಜಾರಿ ಉದ್ದೇಶವೂ ಚುನಾವಣೆ ಪ್ರಚಾರಕ್ಕಿಂತ ಭಿನ್ನವಾಗಿರುವುದಿಲ್ಲ. ಅದಕ್ಕಾಗಿ ರಾಜ್ಯ ಕಾಂಗ್ರೆಸ್‌ ಸರಕಾರ ಯುವನಿಧಿ ಯೋಜನೆ ಉದ್ಘಾಟನೆ ನೆಪದಲ್ಲಿ ಮೂರ್ನಾಲ್ಕು ಜಿಲ್ಲೆಗಳ ಲಕ್ಷಾಂತರ ಯುವ ಸಮೂಹವನ್ನು ಸೇರಿಸಿ ಶಕ್ತಿ ಪ್ರದರ್ಶಿಸಿತು. ಸರಕಾರದ ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಮೂಲಕವೇ ಮತದಾರರನ್ನು ಆಕರ್ಷಿಸುವ ಸಲುವಾಗಿ ಕೆಪಿಸಿಸಿಯು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲು ಸಿದ್ಧತೆ ನಡೆಸಿದೆ.

ಬಿಜೆಪಿ ಯಾತ್ರೆ

ಕೇಂದ್ರದ ಯೋಜನೆಗಳ ಪ್ರಚಾರಕ್ಕೆ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹೆಸರಲ್ಲಿ ಬಿಜೆಪಿ ಸಹ ಜಿಲ್ಲಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅರ್ಹರು ಮತ್ತು ಫಲಾನುಭವಿಗಳ ನೆಪದಲ್ಲಿ ಜನರನ್ನು ಸೇರಿಸಿ ಕೇಂದ್ರದ ಕೊಡುಗೆಗಳನ್ನು ಬಿಂಬಿಸಲಾಗುತ್ತಿದೆ.

ಬಿಜೆಪಿಯಿಂದ ಸಂಸದ ಬಿ.ವೈ.ರಾಘವೇಂದ್ರ ಮತ್ತೆ ಕಣಕ್ಕಿಳಿಯುವುದು ನಿಶ್ಚಿತವಾಗಿರುವುದರಿಂದ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಂದು ದಿನವೂ ವಿರಾಮ ಪಡೆಯದೆ ಕ್ಷೇತ್ರ ಸುತ್ತುತ್ತಿದ್ದಾರೆ.

ಕಳೆದ ಐದು ವರ್ಷದಲ್ಲಿಅವರು ಜಾರಿಗೊಳಿಸಿದ ಹಲವು ಯೋಜನೆಗಳು ಅವರ ಬೆನ್ನಿಗೆ ಇವೆ. ಅವುಗಳಲ್ಲಿ ಕೆಲವನ್ನು ನೀತಿ ಸಂಹಿತೆ ಜಾರಿ ಪೂರ್ವದಲ್ಲೆಉದ್ಘಾಟಿಸುವ ಸಾಧ್ಯತೆ ಇರುವುದರಿಂದ ಯೋಜನೆಗಳ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವ ಪ್ರಯತ್ನ ನಡೆಸಿದ್ದಾರೆ.

Post a Comment

Previous Post Next Post