ಶಿವಮೊಗ್ಗ: ಬದ್ದತೆ ಮತ್ತು ಶ್ರದ್ದೆಯಿಂದ ಮಾಡುವ ಕೆಲಸವೇ ಕೊಡುಗೆ : ಡಾ.ಸೆಲ್ವಮಣಿ ಆರ್.

 ಯಾವುದೇ ಕೆಲಸವನ್ನು ಬದ್ದತೆ ಮತ್ತು ಶ್ರದ್ದೆಯಿಂದ ಮಾಡುವುದೇ ನಾವು ದೇಶಕ್ಕೆ ನೀಡುವ ಕೊಡುಗೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ನುಡಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದೇಶೀಯ ವಿದ್ಯಾಶಾಲಾ ಸಮಿತಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಯುವ ಸೌರಭ ಕಾರ್ಯಕ್ರಮ ಹಾಗೂ ನೆಹರು ಯುವ ಕೇಂದ್ರದಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆಯ ಆದರ್ಶಪುರುಷ ಸ್ವಾಮಿ ವಿವೇಕಾನಂದರು. ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಯುವಜನರಿದ್ದು ಅವರು ದೇಶಕ್ಕೆ ಉತ್ತಮ ಕೊಡುಗೆಯಾಗಿ ರೂಪುಗೊಳ್ಳಬೇಕು. ಚೀನಾ ದೇಶಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿ, ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂತಹ ದೇಶದಲ್ಲಿ ಯುವಜನತೆಗೆ ಹೆಚ್ಚಿನ ಕೌಶಲ್ಯಗಳನ್ನು ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನತೆಗೆ ಬಹಳಷ್ಟು ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೂ ಸದೃಢ ರಾಷ್ಟ್ರ ಕಟ್ಟುವ ವಿವೇಕಾನಂದರ ಕನಸನ್ನು ನನಸು ಮಾಡಲು ಎಲ್ಲ ಯುವಜನತೆ ಕೈಜೋಡಿಸಬೇಕು ಎಂದರು.

      ಸಾಗರದ ನಿವೃತ್ತ ಪ್ರಾಂಶುಪಾಲ ಪ್ರೊ.ಪಂಚಾಕ್ಷರಯ್ಯ ಹೆಚ್.ಬಿ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸ್ವಾಮಿ ವಿವೇಕಾನಂದರು ಓರ್ವ ಮಹಾಚಿಂತಕ. ದೇಶಭಕ್ತ. ಯುವಜನತೆಯ ಪ್ರೇರಣೆ. ಇವರು ಮುಖ್ಯವಾಗಿ 3 ತತ್ವಗಳಲ್ಲಿ ನಂಬಿಕೆ ಇಟ್ಟವರು. ಆಶಾವಾದ, ಸ್ವಾವಲಂಬನೆ ಮತ್ತು ಸಮಾಜ ಬದಲಾವಣೆಗಾಗಿ ವೈಜ್ಞಾನಿಕ ಚಿಂತನೆ.

      ಭಾರತವನ್ನು ಅರ್ಥಪೂರ್ಣ, ಸೌಹಾರ್ಧಯುತ ಮತ್ತು ಸುಂದರಗೊಳಿಸುವುದು ನಮ್ಮೆಲ್ಲರ ಹೊಣೆ. ಹೀಗೆ ಮಾಡಲು ಯುವಜನತೆಯ ವ್ಯಕ್ತಿತ್ವ ವಿಕಸನವಾಗಬೇಕು, ಕ್ರಿಯಾಶೀಲರಾಗಬೇಕು. ಸಂಕಷ್ಟಗಳಿಗೆ ಪರಿಹಾರ ಕಂಡುಕೊಂಡು ಸ್ವಾವಲಂಬಿ ಜೀವನ ನಡೆಸುವುದನ್ನು ನಾವೆಲ್ಲ ಕಲಿಯಬೇಕು. ಅರಿವನ್ನು ಹೊಂದಬೇಕೆಂಬುದು ಸ್ವಾಮಿ ವಿವೇಕಾನಂದರ ಆಶಯವೆಂದರು.

ಜಿ.ಪಂ.ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ತುಂಬಾ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಯುವಜನತೆ ಗಮನ ಹರಿಸಬೇಕು. ಹಾಗೂ ನೆಹರು ಯುವ ಕೇಂದ್ರ ಯುವಜನತೆಯ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ, ರೂಪಿಸುವಲ್ಲಿ ಸಹಕರಿಸುತ್ತದೆ. ಇದರ ಸದುಪಯೋಗವನ್ನು ಯುವಜನತೆ ಪಡೆಯಬೇಕೆಂದರು.

     ದೇಶೀಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷರಾದ ಎಸ್.ಪಿ.ದಿನೇಶ್ ಮಾತನಾಡಿ, ವಿವೇಕಾನಂದರಂತಹ ಆದರ್ಶ ಪುರುಷರ ತತ್ವಗಳನ್ನು ಬಹುತೇಕ ಯುವಜನತೆ ಅಳವಡಿಸಿಕೊಳ್ಳುತ್ತಿಲ್ಲ ಅನ್ನೋದು ವೇದನೆ. ಪ್ರಸ್ತುತ ಮೊಬೈಲ್ ಯುವಮನಸ್ಸುಗಳನ್ನು ಹಾಳು ಮಾಡುತ್ತಿದ್ದು ಇದರ ಬಗ್ಗೆ ಎಚ್ಚೆತ್ತುಕೊಂಡು ತಂತ್ರಜ್ಞಾನವನ್ನು ಒಳ್ಳೆಯ ರೀತಿ ಬಳಕೆ ಮಾಡಿಕೊಳ್ಳಬೇಕು. ಈಗ ನಾವು ಕಲಿತಿದ್ದು ಮುಂದಿನ ಜೀವನಕ್ಕೆ ಅಡಿಪಾಯವಾಗುತ್ತದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದ ಅವರು ಸ್ವ್ವಾಮಿ ವಿವೇಕಾನಂದರು ನಮ್ಮ ದಾರಿದೀಪ. ಅವರ ಕೆಲವಾದರೂ ತತ್ವಗಳನ್ನು ಅಳವಡಿಸಿಕೊಳ್ಳೋಣ ಎಂದರು.

    ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಯುವ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಬ್ಯಾಡ್ಜ್ ಗಳನ್ನು ವಿತರಿಸಿದರು. ಹಾಗೂ ಮೈ ಭಾರತ್ ವಿಕಸಿತ್ ಭಾರತ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ ಅಲ್ತಾಫ್ ರೆಹಮಾನ್ ರನ್ನು ಸನ್ಮಾನಿಸಲಾಯಿತು.

   ಯುವ ಸೌರಭ ಕಾರ್ಯಕ್ರಮದಲ್ಲಿ ಸಾಗರದ ಸುಹಾನ್ ಸಯ್ಯದ್ ಮತ್ತು ತಂಡ ಸುಗಮ ಸಂಗೀತ, ಶಿರಸಿಯ ರಜತ್ ಹೆಗಡೆ ಮತ್ತು ತಂಡ ಜನಪದ ಗೀತೆಗಳು, ಶಿವಮೊಗ್ಗದ ಮನು ಕಲಾ ಕೇಂದ್ರವರು ಸಮೂಹ ನೃತ್ಯ, ಶಿವಮೊಗ್ಗದ ರೋಹನ್ ಮತ್ತು ತಂಡ ಕರಗ ನೃತ್ಯ, ಭದ್ರಾವತಿಯ ರಂಗನಾಥ್ ಮತ್ತು ತಂಡ ಡೊಳ್ಳು ಕುಣಿತ, ಬೆಂಗಳೂರಿನ ಪ್ರಶಾಂತ್ ಶೆಟ್ಟಿ ಮತ್ತು ತಂಡ ‘ಸತಿ’ ನಾಟಕ ಪ್ರದರ್ಶಿಸಿದರು.

      ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್ ಸ್ವಾಗತಿಸಿದರು. ಡಿವಿಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ರಾಜಶೇಖರ್, ಕುವೆಂಪು ವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ, ನೆಹರು ಯುವ ಕೇಂದ್ರದ ಯುವ ಅಧಿಕಾರಿ ಉಲ್ಲಾಸ್ ಕೆಟಿಕೆ ಡಿವಿಎಸ್ ಪ್ರಾಂಶುಪಾಲ ಡಾ.ಎಂ. ವೆಂಕಟೇಶ್ ಪಾಲ್ಗೊಂಡಿದ್ದರು.

Post a Comment

Previous Post Next Post