ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ; 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಅನುಷ್ಠಾನ

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ ಘೋಷಿಸಿದಂತೆ ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. 

                                                              ಸಿಎಂ ಸಿದ್ದರಾಮಯ್ಯ

Posted By : Rekha.M
Source : Online Desk

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ ಘೋಷಿಸಿದಂತೆ ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. 

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮನ್ಸೂನ್‌ ಮಳೆಯನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ನಾಡಿನ ರೈತರಿಗೆ ಸಂಜೀವಿನಿಯಂತಿದ್ದ ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿ ನೀರು ಸಂಗ್ರಹಣೆಗಾಗಿ ಕೃಷಿಹೊಂಡಗಳ ನಿರ್ಮಾಣ, ನೀರು ಇಂಗದಂತೆ ತಡೆಯಲು ಪಾಲಿತಿನ್‌ ಹೊದಿಕೆ, ಹೊಂಡದಿಂದ ನೀರೆತ್ತಲು ಡೀಸೆಲ್‌ ಪಂಪ್‌ ಸೆಟ್‌, ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ ಸಾಧನಗಳು, ಕೃಷಿ ಹೊಂಡದ ಸುತ್ತಲೂ ತಂತಿಬೇಲಿ ನಿರ್ಮಾಣಕ್ಕಾಗಿ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಸಹಾಯಧನ ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಸಚಿವ ಎಚ್‌ಕೆ ಪಾಟೀಲ್ ಅವರು, 2023-24ನೇ ಸಾಲಿನಲ್ಲಿ 24 ಜಿಲ್ಲೆಗಳ 106 ತಾಲೂಕಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೆ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ ಎಂದರು.

ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆ 5 ತಾಲೂಕಿನಲ್ಲಿ ಜಾರಿಗೆ ಒಪ್ಪಿಗೆ ನೀಡಲಾಗಿದೆ. 2025-26ನೇ ಸಾಲಿನ ವರೆಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನಗೊಳ್ಳಲಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಒಟ್ಟು ಮೊತ್ತ 38 ಕೋಟಿ ರೂಪಾಯಿ ಆಗಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಗೆ ವಿಮಾ ಕಂಪನಿ ನಿಗದಿ ಮಾಡಲಾಗಿದೆ. ಕ್ಲಸ್ಟರ್‌ವಾರು ವಿಮಾ ಸಂಸ್ಥೆಗಳ ನಿಗದಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.


Post a Comment

Previous Post Next Post