ದೀಪಾವಳಿಗೆ ಪಟಾಕಿ ಮಾರಾಟ-ಬಳಕೆಗೆ ನಿರ್ಬಂಧ ಹೇರಿ ಹಲವು ಜಿಲ್ಲಾಡಳಿತಗಳು ಆದೇಶ: ಗೋದಾಮು ಮಾಲೀಕರು, ಹಿಂದೂ ಸಂಘಟನೆಗಳಿಂದ ವಿರೋಧ

 ಹಿಂದೂ ಧರ್ಮೀಯರ ಪವಿತ್ರ ಅತಿದೊಡ್ಡ ಹಬ್ಬ ದೀಪಾವಳಿ ಆಚರಣೆಗೆ ಇನ್ನೊಂದೇ ದಿನ ಬಾಕಿ. ಇತ್ತೀಚೆಗೆ ಕರ್ನಾಟಕ - ತಮಿಳುನಾಡು ಗಡಿಯಲ್ಲಿನ ಅತ್ತಿಬೆಲೆಯ ಪಟಾಕಿ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿ 14 ಮಂದಿ ಮೃತಪಟ್ಟ ನಂತರ ಸುರಕ್ಷತೆ ಕಾರಣ ನೀಡಿ ಗೋದಾಮಿನಲ್ಲಿ ಪಟಾಕಿ ಸಂಗ್ರಹಕ್ಕೆ ಹಲವು ಜಿಲ್ಲೆಗಳಲ್ಲಿ ನಿಷೇಧ ಹೇರಿ ಜಿಲ್ಲಾಡಳಿತಗಳು ಸುತ್ತೋಲೆ ಹೊರಡಿಸಿವೆ. 

                                                             ಸಾಂದರ್ಭಿಕ ಚಿತ್ರ

Posted By : Rekha.M
Source : Online Desk
ಬೆಂಗಳೂರು: ಹಿಂದೂ ಧರ್ಮೀಯರ ಪವಿತ್ರ ಅತಿದೊಡ್ಡ ಹಬ್ಬ ದೀಪಾವಳಿ ಆಚರಣೆಗೆ ಇನ್ನೊಂದೇ ದಿನ ಬಾಕಿ. ಇತ್ತೀಚೆಗೆ ಕರ್ನಾಟಕ - ತಮಿಳುನಾಡು ಗಡಿಯಲ್ಲಿನ ಅತ್ತಿಬೆಲೆಯ ಪಟಾಕಿ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿ 14 ಮಂದಿ ಮೃತಪಟ್ಟ ನಂತರ ಸುರಕ್ಷತೆ ಕಾರಣ ನೀಡಿ ಗೋದಾಮಿನಲ್ಲಿ ಪಟಾಕಿ ಸಂಗ್ರಹಕ್ಕೆ ಹಲವು ಜಿಲ್ಲೆಗಳಲ್ಲಿ ನಿಷೇಧ ಹೇರಿ ಜಿಲ್ಲಾಡಳಿತಗಳು ಸುತ್ತೋಲೆ ಹೊರಡಿಸಿವೆ. 

ದೀಪಾವಳಿ ಹಬ್ಬಕ್ಕೆ ಸಾರ್ವಜನಿಕ ಸಾರಿಗೆ ವಾಹನದಲ್ಲಿ ಪಟಾಕಿ ಸಾಗಾಟವನ್ನು ನಿಷೇಧಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.ಮಾಲಿನ್ಯದ ನೆಪವೊಡ್ಡಿ ಕೂಡ ಪಟಾಕಿ ಮಾರಾಟ ಮತ್ತು ಬಳಕೆಗೆ ನಿಯಂತ್ರಣ ಹೇರಲಾಗಿದೆ.

ಡಿಸಿ ಗೂಡ್ಸ್ ವಾಹನಗಳಲ್ಲಿನ ಸಾಗಾಟಕ್ಕೂ ಸಾರಿಗೆ ಇಲಾಖೆಯಿಂದ ಅನುಮತಿ ಕಡ್ಡಾಯ ಎಂದು ಆದೇಶದಲ್ಲಿ ಹೇಳಲಾಗಿದ್ದು, ಅನುಮತಿ ಇಲ್ಲದೆ ಪಟಾಕಿ ಸಾಗಾಟ ಮಾಡಿದರೆ ವಾಹನಗಳ ಪರ್ಮಿಟ್ ರದ್ದು ಮಾಡಿ ಸಾರಿಗೆ ಇಲಾಖೆ ವಾಹನವನ್ನು ವಶಕ್ಕೆ ಪಡೆಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.ದೀಪಾವಳಿ ಹಬ್ಬಕ್ಕೆ ಸಾರ್ವಜನಿಕ ಸಾರಿಗೆ ವಾಹನದಲ್ಲಿ ಪಟಾಕಿ ಸಾಗಾಟವನ್ನು ನಿಷೇಧಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ ಬೆನ್ನಲ್ಲೇ, ಪಟಾಕಿ ಸಾಗಾಟದಲ್ಲಿ ಲೋಪಗಳನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಆರಂಭಿಸಿದ್ದಾರೆ.

ಸಾರ್ವಜನಿಕ ವಾಹನಗಳಲ್ಲಿ ಪಟಾಕಿ ಸಾಗಾಟಕ್ಕೆ ನಿಷೇಧ: ಬಸ್, ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ಸಾರ್ವಜನಿಕ ಸಾರಿಗೆ ವಾಹನದಲ್ಲಿ ಪಟಾಕಿ ಸಾಗಾಟವನ್ನು ನಿಷೇಧ ಮಾಡಿ ಆದೇಶ ಹೊರಡಿಸಲಾಗಿದ್ದು, ಪ್ರಯಾಣಿಕರು ಬಸ್ ನಲ್ಲಿ  ಪಟಾಕಿ ತೆಗೆದುಕೊಂಡು ಹೋಗುವಂತಿಲ್ಲ. ಪ್ರಯಾಣಿಕರು ಖಾಸಗಿ ಬಸ್ ಗಳಲ್ಲಿ ಪಟಾಕಿ ತರದಂತೆಯೂ ಎಚ್ಚರಿಕೆ ವಹಿಸಬೇಕು ಎಂದು ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಮುನ್ಸೂಚನೆ ನೀಡಿದೆ.

ಬಿಜೆಪಿ, ಹಿಂದೂ ಸಂಘಟನೆಗಳ ವಿರೋಧ: ಪಟಾಕಿ ಮಳಿಗೆ ಹಾಕಲು ಸರ್ಕಾರ ಹೊಸ ನಿಯಮಾವಳಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು, ಬಿಜೆಪಿ ಆಕ್ರೋಶ ವ್ಯಕ್ತಪಡಿಸಿವೆ. ಸಿದ್ದರಾಮಯ್ಯ ಸರ್ಕಾರವೇ ಹಿಂದೂ ವಿರೋಧಿಯಾಗಿದೆ. ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಬೇಡದ ನಿಯಮ ಜಾರಿ ತರಲಾಗುತ್ತಿದೆ. ಹಬ್ಬದ ಆಚರಣೆಗಳಿಗೆ ಅಡ್ಡಿ ಪಡಿಸಲಾಗುತ್ತಿದೆ. ಗಣೇಶ ಹಬ್ಬದ ಸಂದರ್ಭದಲ್ಲಿಯೂ ಬಾಂಡ್ ಸೇರಿದಂತೆ ಹಲವು ನಿಯಮ ತರಲಾಯಿತು. ಅಲ್ಲೂ ಸಹ ಅಡ್ಡಿಪಡಿಸುವ ಕೆಲಸವಾಗಿದೆ. ಈಗ ವಿಶ್ವಾದ್ಯಂತ ಹಿಂದೂಗಳು ಆಚರಿಸುವ ದೀಪಾವಳಿ ಹಬ್ಬಕ್ಕೆ ಅಡ್ಡಿಪಡಿಸಲಾಗುತ್ತಿದೆ.

ಮಂಗಳೂರಿನ ಮೂರು ಮೈದಾನದಲ್ಲಿ ಮಾತ್ರ ಪಟಾಕಿ ಮಾರಬೇಕೆಂದು ಹೇಳಲಾಗಿದೆ. ಹಿಂದೂಗಳನ್ನು ದಮನ ಮಾಡಬೇಕೆಂದು ಈ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇಷ್ಟು ಬಲವಾಗಿ ನಿಯಮ ಜಾರಿ ಮಾಡುವುದಾದರೆ ಮೈಕ್ ನಿಯಮ ಜಾರಿಯಾಗಲಿ. ಮಸೀದಿಗಳಲ್ಲಿ ಮೈಕ್ ಗಳನ್ನು ಜೋರಾಗಿ ಕೂಗಲಾಗುತ್ತಿದೆ. ಅದನ್ನು ನಿಲ್ಲಿಸುವ ಕೆಲಸ ಆಗಿದೆಯಾ, ಸುಪ್ರೀಂ ಕೋರ್ಟ್ ನಿಯಮ ಪಾಲನೆ ಆಗಿದೆಯಾ‌‌, ಹಿಂದೂಗಳ ಹಬ್ಬ ಆಚರಣೆ ಅಡ್ಡಿ ಮಾಡಬೇಕೆಂಬ ಧೋರಣೆ ಸರ್ಕಾರದ್ದಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಮರು ಪರಿಶೀಲನೆ ಮಾಡಬೇಕು ಎಂದು ವಿ.ಎಚ್.ಪಿ ಮುಖಂಡ ಪ್ರದೀಪ್ ಸರಿಪಳ್ಳ ಆಗ್ರಹಿಸಿದ್ದಾರೆ.

ಪಟಾಕಿ ಮಳಿಗೆ ಹಾಕಲು ಹೊಸ ನಿಯಮಾವಳಿ ಹಾಕಿದ್ದು ಕಾಂಗ್ರೆಸ್​​ ಸರ್ಕಾರದ ಹುನ್ನಾರ:  ಪಟಾಕಿ ಮಳಿಗೆ ಹಾಕಲು ಹೊಸ ನಿಯಮಾವಳಿ ಹಾಕಿದ್ದು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ಹುನ್ನಾರ ಎಂದು ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಗಂಭೀರ ಆರೋಪ ಮಾಡಿದ್ದಾರೆ. ಹತ್ತು ಹಲವು ನೆಪವೊಡ್ಡಿ ಹಬ್ಬದ ಸಂಭ್ರಮದ ವಾತಾವರಣಕ್ಕೆ ಅಡ್ಡಿ ಮಾಡಲಾಗುತ್ತಿದೆ. ಹಿಂದುಗಳ ಹಬ್ಬ ದೀಪಾವಳಿಯ ಸಂದರ್ಭದಲ್ಲಿಯೇ ಅಡ್ಡಿ ಮಾಡುತ್ತಿದ್ದಾರೆ. ಈ ಮೂಲಕ ತನ್ನ ಎಂದಿನ ಚಾಳಿಯನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಶುರು ಮಾಡಿದೆ ಎಂದು ಮಂಗಳೂರು ದಕ್ಷಣ ಕ್ಷೇತ್ರದ ಸಂಸದ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.

ಧಾರವಾಡ, ಮೈಸೂರಿನಲ್ಲಿ ನಿಷೇಧ: ಧಾರವಾಡ ಜಿಲ್ಲೆಯಲ್ಲಿ ನಿಷೇಧಿತ ಪಟಾಕಿ ಮಾರಾಟ, ಬಳಕೆಗೆ ನಿರ್ಬಂಧಿ ವಿಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಿಯಮ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ. 

ಗೋದಾಮು, ಅಂಗಡಿ ಮಾಲೀಕರು ಅಸಮಾಧಾನ: ದೀಪಾವಳಿ ಹಬ್ಬದ ಹೊಸ್ತಿಲಿನಲ್ಲಿ ಈ ರೀತಿ ನಿಷೇಧ, ನಿರ್ಬಂಧ ಹೇರಿದರೆ ಈಗಾಗಲೇ ಸಂಗ್ರಹಿಸಿಟ್ಟಿರುವ ಪಟಾಕಿಗಳು ನಿಷ್ಟ್ರಯೋಜಕವಾಗುತ್ತದೆ, ನಮಗೆ ಭಾರೀ ನಷ್ಟವಾಗುತ್ತದೆ. ಸರ್ಕಾರ ಈ ಬಾರಿ ವಿನಾಯಿತಿ ನೀಡಬೇಕೆಂದು ಅಂಗಡಿ ಮತ್ತು ಗೋದಾಮು ಮಾಲೀಕರು ಒತ್ತಾಯಿಸಿದ್ದಾರೆ.


Post a Comment

Previous Post Next Post