'ಪಕ್ಷಕ್ಕೆ ಬರುವಾಗ ಜಾಮೂನು, ಅಧಿಕಾರ ಮುಗಿದ ಮೇಲೆ ವಿಷ: ಸ್ವತಃ ಟಿಕೆಟ್ ಪಡೆಯಲಾಗದ ಅಶಕ್ತರ ಮಾತಿಗೆ ಉತ್ತರ ನೀಡಲಾರೆ'

 ಕಾಂಗ್ರೆಸ್‌ಗೆ ನಾನು ರಾಜೀನಾಮೆ ಕೊಟ್ಟು ಬಿಜೆಪಿಗೆ ಬರುವಾಗ ಜಾಮೂನು ಕೊಡ್ತಾರೆ. ಅಧಿಕಾರ ಆದ ಮೇಲೆ ವಿಷ ಕೊಡ್ತಾರೆ. ನನ್ನನ್ನ ಪಕ್ಷದಿಂದ ಹೊರಹಾಕಲು ಕೆಲವರು ಮಾನಸಿಕವಾಗಿ ಸಿದ್ಧರಾಗಿದ್ದಾರೆ

                                           ಎಸ್.ಟಿ ಸೋಮಶೇಖರ್ ಮತ್ತು ಈಶ್ವರಪ್ಪ

Posted By : Rekha.M
Source : Online Desk
ಮೈಸೂರು: ಕಾಂಗ್ರೆಸ್‌ಗೆ ನಾನು ರಾಜೀನಾಮೆ ಕೊಟ್ಟು ಬಿಜೆಪಿಗೆ ಬರುವಾಗ ಜಾಮೂನು ಕೊಡ್ತಾರೆ. ಅಧಿಕಾರ ಆದ ಮೇಲೆ ವಿಷ ಕೊಡ್ತಾರೆ. ನನ್ನನ್ನ ಪಕ್ಷದಿಂದ ಹೊರಹಾಕಲು ಕೆಲವರು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ವಿಧಾನಸಭೆ ಚುನಾವಣೆ ಮುಗಿದ ಬಳಿಕ ನನಗೆ ಸೂಕ್ತ ಗೌರವ ದೊರೆಯುತ್ತಿಲ್ಲ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನಲ್ಲಿದ್ದವನು. ಅವರಾಗಿಯೇ ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್.ಟಿ.ಸೋಮಶೇಖರ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ. ನನ್ನನ್ನ ಪಕ್ಷ ಬಿಡಿಸಲು ರೆಡಿಯಾಗಿದ್ದಾರೆ. ನಾನು ಕ್ಷೇತ್ರದ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ, ಡಿಸಿಎಂ ಹತ್ತಿರ ಹೋಗುತ್ತೇನೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.

ನಾನು ಸಿಎಂ, ಡಿಸಿಎಂ ಹೊಗಳುವುದನ್ನು ಸಹಿಸುತ್ತಿಲ್ಲ. ನನ್ನ ಕಚೇರಿಯಿಂದ ಕಾಂಗ್ರೆಸ್ ಗ್ಯಾರಂಟಿಯಿಂದ ಫಾಲೋಅಪ್ ಮಾಡಿದ್ದೇನೆ. ಇದರಿಂದ ನನ್ನ ಕ್ಷೇತ್ರದ ಜನರಿಗೆ ಅನುಕೂಲವಾಗಿದೆ. ಆದರೆ ಬಿಜೆಪಿಯವರು ಅದೆಲ್ಲ ಕಾಂಗ್ರೆಸ್ ಗ್ಯಾರಂಟಿ, ಅದಕ್ಕೆ ನೀವೇಕೆ ಉತ್ತೇಜನ ನೀಡುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಸರ್ಕಾರ ಯಾವುದಾದರೂ ಇರಲಿ. ಜನಕ್ಕೆ ಒಳ್ಳೆಯದು ಮಾಡುವುದು ಬೇಡವ ಎಂದು ಪ್ರಶ್ನಿಸಿದರು.

ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿದೆ. ಐದಾರು ಜನ ನನ್ನನ್ನು ಈಗಲೇ ಹೋಗಲಿ ಎನ್ನುತ್ತಿದ್ದಾರೆ. ನಾನು ಆಧಿಕಾರಕ್ಕಾಗಿ ಯಾರ ಬಳಿಯೂ ಹೋಗುತ್ತಿಲ್ಲ. ಕಾಂಗ್ರೆಸ್‌ಗೆ ಬಹುಮತವಿದ್ದು, ಅವರಿಗೆ ನನ್ನ ಅಗತ್ಯವೂ ಇಲ್ಲ. ಆದರೆ, ಕ್ಷೇತ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರದ ಒಡನಾಟ ನನಗೆ ಬೇಕಿದೆ  ಎಂದು ನಗರದಲ್ಲಿ ಬುಧವಾರ ತಿಳಿಸಿದರು.

ಪಕ್ಷ ಬಿಟ್ಟು ಹೋಗುವಂತೆ ಹೇಳಲು ಈಶ್ವರಪ್ಪ ಅವರಿಗೆ ನೈತಿಕ ಶಕ್ತಿಯಿಲ್ಲ. ಯಡಿಯೂರಪ್ಪ ನನ್ನನ್ನು ಕರೆತಂದವರು, ಅವರೇ ಕರೆದು ಪಕ್ಷ ಬಿಡಬೇಡ ಎಂದಿದ್ದಾರೆ. ಸ್ವತಃ ಟಿಕೆಟ್ ಪಡೆಯಲು ಆಗದ ಅಶಕ್ತರ ಮಾತಿಗೆ ಉತ್ತರ ನೀಡಿ ನನ್ನ ಗೌರವ ಕಳೆದುಕೊಳ್ಳುವುದಿಲ್ಲ ಎಂದು ಹರಿಹಾಯ್ದರು.

ನನ್ನ ಕ್ಷೇತ್ರದ ಜನರಿಗೆ ಗ್ಯಾರಂಟಿ ಪ್ರಯೋಜನ ದೊರೆಯಲು ಪ್ರಯತ್ನಿಸುತ್ತಿದ್ದೇನೆ. ಕ್ಷೇತ್ರಕ್ಕೆ ಬಂದ ಸಿ.ಎಂ, ಡಿಸಿಎಂ ಜತೆ ಸಮಸ್ಯೆ ಚರ್ಚಿಸಿದ್ದೇನೆ. ಇದು ದೊಡ್ಡ ತಪ್ಪಾ? ನನ್ನ ಮತದಾರರು ಅಭಿವೃದ್ದಿ ಯಾಗಬಾರದೇ? ಬರ ವೀಕ್ಷಣೆಗೆ ಕೇಂದ್ರದ ಅಧಿಕಾರಿಗಳು ಬಂದು ಹೋಗಿದ್ದು, ಇನ್ನೂ ಯಾವುದೇ ಪರಿಹಾರ ಬಂದಿಲ್ಲ. ನನ್ನನ್ನು ಕರೆಯದಿದ್ದರೂ ಪರವಾಗಿಲ್ಲ, ಅವರಾದರೂ ಹಿಂದೆ ಬಿದ್ದು ಪ್ರಯತ್ನಿಸಲಿ ಎಂದು ಕಿಡಿಕಾರಿದರು.


Post a Comment

Previous Post Next Post