'ಒಬ್ಬೇ ಒಬ್ಬ ಬಿಜೆಪಿ ಪರಿವಾರದ ಸದಸ್ಯ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲು ಸೇರಿಲ್ಲ': ಸಿಎಂ ಸಿದ್ದರಾಮಯ್ಯ

 ಒಬ್ಬೇ ಒಬ್ಬ ಬಿಜೆಪಿ ಪರಿವಾರದ ಸದಸ್ಯ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲು ಸೇರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತ ತಲೆ ಎತ್ತಿ ನಿಲ್ಲಲು ನೆಹರು  ಭಾರತ ದೇಶಕ್ಕೆ ಹಾಕಿದ ಭದ್ರ ಬುನಾದಿ ಕಾರಣ ಎಂದು ತಿಳಿಸಿದರು. 

                                                          ಸಿದ್ದರಾಮಯ್ಯ ಭಾಷಣ

Posted By : Rekha.M
Source : Online Desk
ಬೆಂಗಳೂರು: ಒಬ್ಬೇ ಒಬ್ಬ ಬಿಜೆಪಿ ಪರಿವಾರದ ಸದಸ್ಯ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲು ಸೇರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತ ತಲೆ ಎತ್ತಿ ನಿಲ್ಲಲು ನೆಹರು  ಭಾರತ ದೇಶಕ್ಕೆ ಹಾಕಿದ ಭದ್ರ ಬುನಾದಿ ಕಾರಣ ಎಂದು ತಿಳಿಸಿದರು. 
ಕೆಪಿಸಿಸಿ  ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು ಅಷ್ಟೆ. ಇವರ್ಯಾರೂ ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ಪಿತಪ್ಪಿಯೂ ಹೋರಾಡಿದವರಲ್ಲ. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ ಎನ್ನುವ ಕೀಳರಿಮೆ ಮತ್ತು ಅಳುಕಿನಿಂದ ಸ್ವಾತಂತ್ರ್ಯ ಹೋರಾಟಗಾರರಾಗಿ 9 ವರ್ಷ ಜೈಲು ವಾಸ ಅನುಭವಿಸಿ 17 ವರ್ಷ ದೇಶದ ಪ್ರಧಾನಿ ಆಗಿದ್ದ ನೆಹರೂ ಅವರನ್ನು ಆಡಿಕೊಳ್ಳುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು. 
ಶಿಕ್ಷಣ ಸಂಸ್ಥೆಗಳು, ವಿಜ್ಞಾನ-ಸಂಶೋಧನಾ ಸಂಸ್ಥೆಗಳು, ತಂತ್ರಜ್ಞಾನ, ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಿದ್ದು, ಕೃಷಿ ಅಭಿವೃದ್ಧಿ ನೆಹರೂ ಅವರ ದೂರದೃಷ್ಟಿಯ ಸಾಧನೆಗಳಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇಲ್ಲಿ ಏನೇನೂ ಇರಲಿಲ್ಲ. ಶಿಕ್ಷಣ ಸಂಸ್ಥೆಗಳು ಇರಲಿಲ್ಲ, ನೀರಾವರಿ ವ್ಯವಸ್ಥೆ ಇರಲಿಲ್ಲ. ಆದರೆ ದೇಶದ ಮೊದಲ ಪ್ರಧಾನಿಯಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ಪ್ರಜಾಪ್ರಭುತ್ವವಾದಿ ದೇಶವಾಗಿ ಭಾರತವನ್ನು ಕಟ್ಟಿ ನಿಲ್ಲಿಸಿದವರು ನೆಹರು ಎಂದರು. 
ಶಿಕ್ಷಣ ಸಂಸ್ಥೆಗಳು, ವಿಜ್ಞಾನ, ಸಂಶೋಧನಾ ಸಂಸ್ಥೆಗಳು, ತಾಂತ್ರಿಕ ಕಾಲೇಜುಗಳು, ವೈದ್ಯಕೀಯ ಅಧ್ಯಯನ ಸಂಸ್ಥೆಗಳು, ಅಣೆಕಟ್ಟುಗಳು, ಆಸ್ಪತ್ರೆಗಳು ಸೇರಿ ಆಧುನಿಕ ಭಾರತದ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕ್ಷೇತ್ರಗಳನ್ನೂ ಆಗಿನ ಕಾಲಕ್ಕೇ ಸ್ಥಾಪಿಸಿದ್ದರು. 17 ವರ್ಷಗಳ ಕಾಲ ಪ್ರಧಾನಿ ಆಗಿದ್ದ ನೆಹರೂ ಅವರು ಚರ್ಚೆ, ಸಂವಾದದಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಶ್ರಮಿಸುವವರ ಕಟುಟೀಕೆಗಳನ್ನೂ ಅತ್ಯಂತ ಸಹನೆಯಿಂದ ಸ್ವೀಕರಿಸುತ್ತಿದ್ದರು. ಅಷ್ಟು ದೊಡ್ಡ ವ್ಯಕ್ತಿತ್ವ ನೆಹರೂ ಅವರದ್ದಾಗಿತ್ತು ಎಂದು ಸ್ಮರಿಸಿದರು.

Post a Comment

Previous Post Next Post