ಸತ್ತವರನ್ನೂ ಬಿಡುತ್ತಿಲ್ಲ ವಂಚಕರು; ಮೃತರ ಗುರುತು ದುರ್ಬಳಕೆ!

 ಹಣ ದೋಚಲು ವಂಚಕರು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದು, ಈಗ ವಂಚಕರು ಮೃತರ ಗುರುತನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. 

                                                   ನಕಲಿ ದಾಖಲೆ (ಸಾಂಕೇತಿಕ ಚಿತ್ರ)

Posted By : Rekha.M
Source : Online Desk

ಬೆಂಗಳೂರು: ಹಣ ದೋಚಲು ವಂಚಕರು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದು, ಈಗ ವಂಚಕರು ಮೃತರ ಗುರುತನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. 

ಖಾಸಗಿ ಕಂಪನಿ ವ್ಯವಸ್ಥಾಪಕರೊಬ್ಬರಿಗೆ ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ವಂಚಕರು ಕರೆ ಮಾಡಿ ಟ್ರಾಫಿಕ್ ನಿಯಮ ಉಲ್ಲಂಘನೆಯ ಕಾರಣ ಕೇಳಿ 1,500 ರೂಪಾಯಿ ವಂಚನೆ ಮಾಡಲು ಯತ್ನಿಸಿದ್ದರು. ಆದರೆ ವಂಚಕರಿಂದ ತಪ್ಪಿಸಿಕೊಳ್ಳುವಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿ ಯಶಸ್ವಿಯಾಗಿದ್ದರು. 

ವಂಚಕ ತನ್ನ ಪೊಲೀಸ್ ಗುರುತನ್ನು ಸಾಬೀತುಪಡಿಸುವುದಕ್ಕಾಗಿ ಮೃತ ಪೊಲೀಸ್ ಪೇದೆಯೊಬ್ಬರ ಹೆಸರು, ಫೋಟೋಗಳನ್ನು ಬಳಕೆ ಮಾಡಿಕೊಂಡಿರುವುದು ಅಘಾತಕಾರಿಯಾಗಿದೆ. 

ಕೆಂಗೇರಿ ನಿವಾಸಿಯಾಗಿರುವ ಎಸ್ ಸುಜಿತ್ ಗೆ ಕುಮಾರ ಸ್ವಾಮಿ ಎಂಬುವವರಿಂದ ಕರೆ ಬಂದಿತ್ತು. "ನೀವು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದೀರಿ ಆದ್ದರಿಂದ ದಂಡ ಪಾವತಿಸಬೇಕು" ಎಂದು ಕರೆ ಮಾಡಿದ್ದವರು ಸೂಚಿಸಿದ್ದರು. ನಾನು ರಾತ್ರಿ ಪಾಳಿ ಮುಗಿಸಿ ಬಂದು ಮಲಗಿದ್ದೆ, ಈ ಕರೆ ಸ್ವೀಕರಿಸಿ ಮಾತನಾಡಿದಾಗ ನಿಯಮ ಉಲ್ಲಂಘನೆ ವಿವರಗಳು ಸರಿ ಇದ್ದವು ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸರ ಅಧಿಕೃತ ವೆಬ್ ಸೈಟ್ ನಲ್ಲಿ ತೋರಿಸುತ್ತಿದೆ. ಆದರೆ ಇದರಲ್ಲಿ ಏನೋ ವಿಲಕ್ಷಣವಾದದ್ದು ಇರುವುದನ್ನು ಗಮನಿಸಿದೆ. ನನಗೆ ಕರೆ ಮಾಡಿದ ಪೊಲೀಸ್ ಪೇದೆ ಕೇವಲ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದ, ಇದು ನನಗೆ ಅನುಮಾನ ಮೂಡಿಸಿತು.  ಕಾರು ನಿಯಮ ಉಲ್ಲಂಘನೆ ಮಾಡಿರುವ ಫೋಟೋಗಳನ್ನೂ ನನಗೆ ಆತ ವಾಟ್ಸ್ ಆಪ್ ಮೂಲಕ ಕಳಿಸಿದ್ದ. 

ದಂಡದ ಮೊತ್ತವನ್ನು ಪೇಟಿಎಂ, ಯುಪಿಐ ಆಪ್ ಬಳಕೆ ಮಾಡಿ ಪಾವತಿ ಮಾಡಬಹುದೆಂದು ಹೇಳಿ ಕ್ಯುಆರ್ ಕೋಡ್ ನ್ನೂ ಕಳಿಸಿದ. ಅದರಲ್ಲಿ ಬೆಂಗಳೂರು ಸಿಟಿ ಪೊಲೀಸ್ ಎಂದು ಹೆಸರು ನಮೂದಾಗಿತ್ತು. ಆದರೆ ನಾನು ಪಾವತಿ ಮಾಡುವುದಕ್ಕೆ ಮುಂದಾದಾಗ ಹೆಸರು ರೂಪಾಲಿ ಮಜುಮ್ದಾರ್ ಎಂದು ತೋರಿಸಿತು. ಇದರಲ್ಲೇನೋ ಮೋಸ ಇದೆ ಎಂಬ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪಾವತಿ ಮಾಡುವುದನ್ನು ನಿಲ್ಲಿಸಿ ಗುರುತಿನ ಚೀಟಿ ಕೇಳಿದೆ. 

ನಂತರ ಕರೆ ಮಾಡಿದವರು ಕುಮಾರ ಸ್ವಾಮಿ (ಸಿವಿಲ್ ಹೆಡ್ ಕಾನ್ಸ್‌ಟೇಬಲ್ - 5921) ಎಂಬ ಹೆಸರಿನ ಗುರುತಿನ ಚೀಟಿಯನ್ನು ಕಳುಹಿಸಿದರು, ಜೊತೆಗೆ ಸಮವಸ್ತ್ರ ಧರಿಸಿದ ಪೋಲೀಸರ ಛಾಯಾಚಿತ್ರ ಅದಾಗಿತ್ತು.

ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಸುಜಿತ್ ಈ ವಿಷಯವನ್ನು ಪತ್ನಿಯೊಂದಿಗೆ ಚರ್ಚಿಸಿದರು, ಆಕೆ ತನ್ನ ಸಹೋದ್ಯೋಗಿಗಳಿಗೆ ಈ ವಿಷಯ ತಿಳಿಸಿದರು. ಸಹೋದ್ಯೋಗಿಗಳ ಪೈಕಿ ಒಬ್ಬರು ಪೊಲೀಸ್ ಪೇದೆಯ ಗುರುತನ್ನು ಆನ್ ಲೈನ್ ನಲ್ಲಿ ಪರಿಶೀಲಿಸಲು ಮುಂದಾದಾಗ, ಪೊಲೀಸ್ ಪೇದೆಯ ಐಡಿ ನಂ.5921 ಹಾಗೂ ಫೋಟೊ 2020 ರ ಫೆ.03 ರಂದು ನಂದಿನಿ ಲೇಔಟ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮುಖ್ಯಪೇದೆ ಭಕ್ತರಾಮ್ ಎಸ್ ವೈ ಎಂಬುವವರಿಗೆ ಸೇರಿದ್ದು ಎಂಬ ಮಾಹಿತಿ ಬಹಿರಂಗವಾಗಿದೆ.

ಅವರ ಚಿತ್ರವು ವೆಬ್‌ಸೈಟ್‌ಗಳಲ್ಲಿ ಲಭ್ಯವಿತ್ತು ಮತ್ತು ವಂಚಕನು ತನ್ನ ರುಜುವಾತುಗಳನ್ನು ಸ್ಥಾಪಿಸಲು ಮೃತ ವ್ಯಕ್ತಿಯ ಫೋಟೋವನ್ನು ಬಳಸಿದ್ದ, ”ಎಂದು ಸುಜಿತ್  ವಿವರಿಸಿದ್ದಾರೆ.  ವಂಚಕನನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು, ಇಲ್ಲದೇ ಇದ್ದಲ್ಲಿ, ಜನರು ಮೋಸಗಾರರಿಗೆ ಬಲಿಯಾಗುವ ಮೂಲಕ ದೊಡ್ಡ ಮೊತ್ತವನ್ನು ಕಳೆದುಕೊಳ್ಳುತ್ತಾರೆ" ಎಂದು ಸುಜಿತ್ ಒತ್ತಾಯಿಸಿದ್ದಾರೆ.


Post a Comment

Previous Post Next Post