ಅಯೋಧ್ಯಾದ ರಾಮಮಂದಿರಕ್ಕೆ ಮೊದಲ ಚಿನ್ನ ಲೇಪಿತ ದ್ವಾರ ಅಳವಡಿಕೆ

 ಅಯೋಧ್ಯಾ: ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಇರುವಾಗ ಮೊದಲ ಚಿನ್ನದ ಬಾಗಿಲನ್ನು ಅಳವಡಿಸಲಾಗಿದೆ. 12 ಅಡಿ ಎತ್ತರ ಹಾಗೂ ಎಂಟು ಅಡಿ ಅಗಲವಿರುವ ಬಾಗಿಲನ್ನು ಪವಿತ್ರ ಗರ್ಭಗುಡಿಯ ಮೇಲಿನ ಮಹಡಿಗೆ ಅಳವಡಿಸಲಾಗಿದೆ.

 

ಮುಂದಿನ ಮೂರು ದಿನಗಳಲ್ಲಿ ಇನ್ನೂ 13 ಚಿನ್ನ ಲೇಪಿತ ಬಾಗಿಲುಗಳನ್ನು ಅಲ್ಲಿ ಅಳವಡಿಸಲಾಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಕಚೇರಿ ತಿಳಿಸಿದೆ.

ರಾಮ ಮಂದಿರಕ್ಕೆ ಒಟ್ಟು 46 ಬಾಗಿಲುಗಳನ್ನು ಅಳವಡಿಸಲಾಗುತ್ತದೆ. ಇವುಗಳ ಪೈಕಿ 42 ಬಾಗಿಲುಗಳು ಚಿನ್ನ ಲೇಪಿತವಾಗಿರುತ್ತವೆ. ಇದಕ್ಕೆ ಸುಮಾರು 100 ಕೆಜಿ ಚಿನ್ನ ಬಳಸಲಾಗುತ್ತದೆ ಎಂದು ಸಿಎಂಒ ಹೇಳಿದೆ. ಚಿನ್ನದ ಬಾಗಿಲಿನ ಮಧ್ಯ ಭಾಗದಲ್ಲಿ ಸ್ವಾಗತದ ನಿಲುವಿನಲ್ಲಿ ಎರಡು ಆನೆಗಳ ಆಕೃತಿಯನ್ನು ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಅರಮನೆ ಶೈಲಿಯ ಆಕಾರವಿದ್ದು, ಇಬ್ಬರು ಸೇವಕರು ಕೈಗಳನ್ನು ಜೋಡಿಸಿ ನಿಂತಿದ್ದಾರೆ. ಬಾಗಿಲನ ಕೆಳಭಾಗದ ನಾಲ್ಕು ಚೌಕಾಕೃತಿಗಳಲ್ಲಿ ಕೂಡ ಚೆಂದನೆಯ ಕೆತ್ತನೆಗಳನ್ನು ಮಾಡಲಾಗಿದೆ.

ರಾಮಮಂದಿರ ನಿರ್ಮಾಣದ ಉಸ್ತುವಾರಿ ನಿರ್ವಹಿಸುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌, ರಾತ್ರಿ ಬೆಳಕಿನಲ್ಲಿ ಕಂಗೊಳಿಸುತ್ತಿರುವ ದೇವಾಲಯದ ಚಿತ್ರಗಳನ್ನು ಹಂಚಿಕೊಂಡಿದೆ. ದೇವಸ್ಥಾನದ ಗೋಡೆಗಳು ಹಾಗೂ ಸ್ತಂಭಗಳನ್ನು ಅಲಂಕರಿಸಿರುವ ಜಟಾಯುದ ಕೆತ್ತನೆಗಳ ಚಿತ್ರಗಳನ್ನು ಟ್ರಸ್ಟ್ ಬಿಡುಗಡೆ ಮಾಡಿದ. ಜತೆಗೆ ದೇವತೆಗಳು, ದೇವರ ಕೆತ್ತನೆಗಳಿರುವ ಚಿತ್ರಗಳನ್ನು ಹಂಚಿಕೊಂಡಿದೆ.

ರಾಮ ಮಂದಿರ ಪ್ರವೇಶ ದ್ವಾರದ ಆನೆಗಳು, ಸಿಂಹಗಳು, ಆಂಜನೇಯ ಮತ್ತು ವಿಷ್ಣುವಿನ ವಾಹನ ಗರುಡನ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ಮೂರು ಅಂತಸ್ತಿನಲ್ಲಿ ನಿರ್ಮಾಣವಾಗುತ್ತಿರುವ ದೇಗುಲವು ಪೂರ್ವ- ಪಶ್ಚಿಮವಾಗಿ 360 ಅಡಿ, 250 ಅಡಿ ಅಗಲ ಮತ್ತು 161 ಅಡಿ ಎತ್ತರವಾಗಿ ಇರಲಿದೆ. 392 ಸ್ತಂಭಗಳು 44 ಬಾಗಿಲುಗಳನ್ನು ಹೊಂದಿರಲಿದೆ. ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನಾ ಮಂಟಪಗಳು- ಹೀಗೆ ಐದು ಮಂಟಪಗಳನ್ನು ಒಳಗೊಂಡಿರಲಿದೆ.

ಶಾಲೆ- ಕಾಲೇಜುಗಳಿಗೆ ರಜೆ

ಜನವರಿ 22ರಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ರಜೆ ಘೋಷಣೆ ಮಾಡಿದ್ದಾರೆ. ಹಾಗೆಯೇ ಅಂದು ರಾಜ್ಯದ ಎಲ್ಲಾ ಕಡೆಯೂ ಮದ್ಯ ಮಾರಾಟವನ್ನು ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ.

ಅಯೋಧ್ಯಾದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಯ ಪರಾಮರ್ಶೆ ನಡೆಸಲು ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್, ಅಯೋಧ್ಯಾ ನಗರದಲ್ಲಿ ಸ್ವಚ್ಛತೆಗೆ 'ಕುಂಭ ಮಾದರಿ' ಅಳವಡಿಸಲು ಸೂಚಿಸಿದರು. ಜನವರಿ 14ರಂದು ಅಯೋಧ್ಯಾದಲ್ಲಿ ಸ್ವಚ್ಛತಾ ಅಭಿಯಾನ ಆರಂಭವಾಗಲಿದೆ ಎಂದು ತಿಳಿಸಿದ ಅವರು, ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಸಿದ್ಧತೆ ಸಂದರ್ಭದಲ್ಲಿ ಶುದ್ಧ ಹಾಗೂ ನಿರ್ಮಲ ನಗರ ನಿರ್ವಹಣೆಯ ಮಹತ್ವವನ್ನು ಒತ್ತಿ ಹೇಳಿದರು.

Post a Comment

Previous Post Next Post