ವೇಷ ಬದಲಾಯಿಸಿ ಗುಜರಾತಿನಲ್ಲಿ ತಲೆಮರೆಸಿಕೊಂಡಿದ್ದ 'ಸ್ಯಾಂಟ್ರೋ ರವಿ' ಸೇರಿ ನಾಲ್ವರ ಸೆರೆ: ಎಡಿಜಿಪಿ ಅಲೋಕ್ ಕುಮಾರ್

 ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಅನೈತಿಕ ದಂಧೆ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿಯನ್ನು ಗುಜರಾತಿನ ಅಹಮಾದಾಬಾದ್ ನಲ್ಲಿ ಬಂಧಿಸುವಲ್ಲಿ ರಾಜ್ಯ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. 

               ಬಂಧಿತ ಆರೋಪಿ ಸ್ಯಾಂಟ್ರೋ ರವಿ

By : Rekha.M
Online Desk

ಮೈಸೂರು: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಅನೈತಿಕ ದಂಧೆ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿಯನ್ನು ಗುಜರಾತಿನ ಅಹಮಾದಾಬಾದ್ ನಲ್ಲಿ ಬಂಧಿಸುವಲ್ಲಿ ರಾಜ್ಯ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. 

ಈ ಕುರಿತು ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಮತ್ತು ಸುವ್ಯವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಕಳೆದ 11 ದಿನಗಳಿಂದ ರಾಜ್ಯ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ರಾಮ್ ಜಿ,  ಸತೀಶ್, ಮಧುಸೂದನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದರು.

ನಿನ್ನೆ ದಿನ ಮಂತ್ರಾಲಯದಲ್ಲಿ ಸ್ಯಾಂಟ್ರೋ ರವಿ ಆಪ್ತನನ್ನು ಬಂಧಿಸಲಾಗಿತ್ತು. ನಂತರ ದೊರೆತ ಖಚಿತ ಮಾಹಿತಿ ಮೇರೆಗೆ ಗುಜರಾತ್ ಗೆ ತೆರಳಿದ ವಿಶೇಷ ತಂಡದಿಂದ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಟ್ರಾನ್ಸಿಟ್ ವಾರೆಂಟ್ ಪಡೆದು ಮೈಸೂರಿಗೆ ಕರೆತರುತ್ತೇವೆ ಎಂದರು.

ಜನವರಿ 1 ರಂದು ಮೈಸೂರಿನಲ್ಲಿ ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ, ರಾಜ್ಯದ ಹಲವೆಡೆ ಕಾರಿನಲ್ಲಿ ಸುತ್ತಾಡಿದ್ದ, ನಂತರ ಗುಜರಾತ್ ಗೆ ತೆರಳಿ ವೇಷ ಬದಲಿಸಿಕೊಂಡಿದ್ದ. ನಿತ್ಯ ಜಾಗ ಹಾಗೂ ಮೊಬೈಲ್ ಸೀಮ್ ಬದಲಾಯಿಸುತ್ತಿದ್ದರಿಂದ ಆತನ ಬಂಧನ ವಿಳಂಬವಾಗಿತ್ತು. ಆತನ ಬಂಧನಕ್ಕಾಗಿ ಮಂಡ್ಯ, ಮೈಸೂರು, ರಾಮನಗರ ಎಸ್ ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.  ಈ ತಂಡ ಗುಜರಾತ್ ಪೊಲೀಸರ ನೆರವಿನಿಂದ ಇಂದು ಮಧ್ಯಾಹ್ನ ಆರೋಪಿಯನ್ನು ಬಂಧಿಸಿದೆ ಎಂದು ಎಡಿಜಿಪಿ ವಿವರಿಸಿದರು.

ಸ್ಯಾಂಟ್ರೋ ರವಿ ವೈಟ್ ಕಾಲರ್ ಕ್ರಿಮಿನಲ್. ಆತ  ಈ ಹಿಂದೆ 11 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. 2005ರಲ್ಲಿ ಗೂಂಡಾ ಕಾಯ್ದೆಯಡಿ ಆತನನ್ನು ಬಂಧಿಸಲಾಗಿತ್ತು ಎಂದು ತಿಳಿಸಿದ ಅಲೋಕ್ ಕುಮಾರ್, ಬೆಂಗಳೂರಿನ ರಾಜರಾಜೇಶ್ವರಿ ನಗರ, ಹಾಗೂ ಮೈಸೂರಿನ ಆತನ ಎರಡು ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗುಜರಾತ್ ನಿಂದ ಆರೋಪಿಯನ್ನು ಕರೆತಂದ ನಂತರ ಆತನ ವಿರುದ್ದದ ಕೇಸ್ ಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಎಡಿಜಿಪಿ ತಿಳಿಸಿದರು. 

ಈ ಮಧ್ಯೆ ಸ್ಯಾಂಟ್ರೋ ರವಿ ಬಂಧನದೊಂದಿಗೆ ಎಲ್ಲಾ ವದಂತಿಗಳಿಗೆ ತೆರೆ ಎಳೆಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.


Post a Comment

Previous Post Next Post